ರಾಜಕಪೂರ್ 1924-86. ಹಿಂದೀ ಚಿತ್ರರಂಗದ ಪ್ರಸಿದ್ಧ ನಾಯಕನಟ. ನಿರ್ದೇಶಕ ಹಾಗೂ ನಿರ್ಮಾಪಕ. ಇಂದಿನ ಪಾಕಿಸ್ತಾನದ ಪೆಷಾವರ್‍ನಲ್ಲಿ 1924 ಡಿಸೆಂಬರ್ 14 ರಂದು ಜನಿಸಿದರು. ಇವರ ಮೊದಲ ಹೆಸರು ರಣಭಿರಾಜ ಕಪೂರ್, ಪ್ರಸಿದ್ಧ ರಂಗಭೂಮಿ ಹಾಗೂ ಚಿತ್ರನಟ ಪೃಥ್ವೀರಾಜಕಪೂರ್ ಇವರ ತಂದೆ. ತಂದೆಯ ಅಭಿನಯದಿಂದ ಸ್ಪೂರ್ತಿಗೊಂಡು ಕ್ಲಾಪ್‍ಬಾಯ್ ಆಗಿ ಸಿನಿಮಾರಂಗವನ್ನು ಪ್ರವೇಶಿಸಿದರು. ಹನ್ನೊಂದನೆಯ ವಯಸ್ಸಿಗೇ ಇನ್‍ಕ್ವಿಲಾಬ್ (1935). ಹಮಾರಿಬಾತ್ (1943), ಗೌರಿ (1946) ಎಂಬ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ. ಬಾಂಬೆ ಟಾಕೀಸಿನಲ್ಲಿ ಸಹಾಯಕನಾಗಿ ಕೆಲಸಮಾಡುತ್ತಲೇ ಪೃಥ್ವೀ ನಟರಾಗಿ ದುಡಿದರು. ವಾಲ್ಮೀಕಿ (1947) ಚಿತ್ರದಲ್ಲಿ ನಾರದನ ಪಾತ್ರ ವಹಿಸುವ ಮೂಲಕ ಕಿದಾಲ್ ಶರ್ಮಾರ ಚಿತ್ರರಂಗದಲ್ಲಿ ಮುಖ್ಯಪಾತ್ರ ವಹಿಸಿದರು. ನೀಲ್‍ಕಮಲ್ (1948) ಚಿತ್ರದಲ್ಲಿ ನಾಯಕ ನಟನಾದರು. 1948 ರಲ್ಲಿ ಆರ್. ಕೆ. ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯ ಮೊದಲ ಕೊಡುಗೆ ಆಗ್ (1949). ಈ ಚಿತ್ರದಿಂದ ರಾಜ್‍ಕಪೂರ್ ನರ್ಗಿಸ್ ನಂಟಿನ ಆರಂಭ. ಈ ಸಂಸ್ಥೆಯನ್ನು ಪೂರ್ಣ ಪ್ರಮಾಣದ ಚಿತ್ರ ನಿರ್ಮಾಣ ಸಂಸ್ಥೆಯನ್ನಾಗಿ 1950 ರಲ್ಲಿ ಪರಿವರ್ತಿತವಾಯಿತು. ಹಲವಾರು ಚಿತ್ರಗಳನ್ನು ನಿರ್ಮಿಸುವುದರ ಮೂಲಕ ಈ ಸಂಸ್ಥೆ ಭಾರತದಲ್ಲಿಯೇ ಖ್ಯಾತಿ ಪಡೆಯಿತು. ರಾಜಕಪೂರ್ ತಾವೇ ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಾಯಕ ನಟನಾಗಿ ಹಲವಾರು ಚಿತ್ರಗಳನ್ನು ತಯಾರಿಸಿದರು. ಬರ್ಸಾತ್ (1949), ಆವಾರ (1951), ಶ್ರೀ 420 (1955), ಜಾಗ್ತೆರಹೊ (1957), ಸಂಗಮ್ (1964), ಮೇರ ನಾಮ್ ಜೋಕರ್ (1970) ಮುಂತಾದ ಚಿತ್ರಗಳು ತುಂಬ ಜನಪ್ರಿಯವಾದವು. ಇವರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾನೆ. ಆಹ್ (1953), ಬೂಟ್ ಪಾಲಿಶ್ (1954), ಅರೌಂಡ್ ದ ವರ್ಲ್ಡ್ (1967), ಕಲ್ ಆಜ್ ಜೌರ್ ಕಲ್ (1971) - ಇವು ರಾಜ್‍ಕಪೂರ್‍ರ ಇತರ ಚಿತ್ರಗಳು.

ಜಾಗ್ತೆರಹೊ ಚಿತ್ರ ಬಂಗಾಲಿ ಭಾಷೆಯಲ್ಲಿಯೂ ತೆರೆ ಕಂಡಿದೆ. ಇದು ಕಾರ್ಲೋವಾರಿಯಲ್ಲಿ (ರಷ್ಯ) ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಆಜ್ ದಿಲ್ಲೀ ದೂರ್ ನಹೀ ಮತ್ತು ಜಿಸ್ ದೇಶ್ ಮೇ ಗಂಗಾ ಬಹತಿ ಹೈ ಚಿತ್ರಗಳಿಗೆ ಇವರ ನಿರ್ದೇಶನಕ್ಕಾಗಿ ಫಿಲಮ್ ಫೇರ್ ಪ್ರಶಸ್ತಿಗಳು ದೊರೆತಿವೆ. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನೂ 1986 ರಲ್ಲಿ ದಾದಾಸಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದ ಕೆಲವೇ ದಿನಗಳಲ್ಲಿ ರಾಜ್ ನಿಧನ ಹೊಂದಿದರು. 

ಚಿತ್ರರಂಗದಲ್ಲಿ ವಿವಿಧ ಬಗೆಯ ಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸಿದ್ದಾರೆ. ಇವರದು ವಿಶೇಷವಾದ ಅನನುಕರಣೀಯವಾದ ನಟನಾ ಶೈಲಿ. ಇವರ ಅಭಿನಯದ ಮೇಲೆ ಸುಪ್ರಸಿದ್ಧ ಇಂಗ್ಲಿಷ್ ನಟ ಚಾರ್ಲಿ ಚಾಪ್ಲಿನ್‍ನ ಗಾಢವಾದ ಪ್ರಭಾವವಾಗಿರುವುದನ್ನು ಗುರುತಿಸಬಹುದು. 

ತಾಜಾ ತಾರುಣ್ಯದ ಹೊಸ ಹೊಸ ಸ್ತ್ರೀ ಪ್ರತಿಭೆಗಳನ್ನು ವಿಶಿಷ್ಟವಾಗಿ ಬೆಳ್ಳಿ ತೆರೆಯ ಮೇಲೆ ತರುವುದರ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಇವರು ಗಳಿಸಿದರು. ಈ ಅಂಶವೇ ಬಾಕ್ಸ್ ಆಫೀಸಿನಲ್ಲಿ ರಾಜಕಪೂರ್ ಸಿನಿಮಾ ಎಂದು ಬ್ರಾಂಡ್ ಆಗಲು ಕಾರಣವಾಯಿತು. ಇವರು ನಿರ್ಮಿಸಿದ ಚಿತ್ರಗಳು ಅದ್ದೂರಿಯಾಗಿರುತ್ತಿದ್ದವು. ಕಣ್ಣು ತುಂಬುವ ಛಾಯಾಗ್ರಹಣ. ಕಿವಿ ಹಾಗೂ ಮನಸ್ಸನ್ನು ತುಂಬುವ ಚಿತ್ರ ಸಂಗೀತ ಇವರ ಚಿತ್ರಗಳ ಯಶಸ್ಸಿನ ಮುಖ್ಯ ಸೂತ್ರಗಳಾಗಿದ್ದವು. ಇವರ ಚಿತ್ರಗಳು ಭಾರತದ ಉದ್ದಗಲಕ್ಕೂ ಜನಪ್ರಿಯವಾಗಿದ್ದವು. ಇವರ ಅಭಿನಯವನ್ನು ರಷ್ಯದ ಅಭಿಮಾನಿಗಳು ಅಪಾರವಾಗಿ ಮೆಚ್ಚಿಕೊಂಡಿದ್ದರು. ಭಾರತೀಯನಾಗಿ ರಷ್ಯದಲ್ಲಿ ಅಪಾರ ಜನಪ್ರಿಯ ವ್ಯಕ್ತಿಯಾಗಿದ್ದರು. ಸಂಗಮ್ ಇವರ ಮೊದಲ ಬಣ್ಣದ ಚಿತ್ರ. ಯುರೋಪಿನ ಹಲವು ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. 

ತನ್ನ ಕಿರಿಯ ಮಗ ರಿಷಿಕಪೂರ್‍ನನ್ನು ಬಾಬ್ಬಿ (1974) ಚಿತ್ರದಲ್ಲಿ ನಾಯಕ ನಟನಾಗಿ ಪರಿಚಯಿಸಿದರು. ಈ ಚಿತ್ರ ಹದಿಹರೆಯದ ಯುವಕ ಯುವತಿಯರ ಮನಸ್ಸನ್ನು ಸೂರೆಗೊಂಡಿತು. ಯುವ ಪ್ರೇಮಿಗಳಿಬ್ಬರ ಉತ್ಕಟ ಪ್ರೀತಿಯನ್ನು ತೆರೆಯ ಮೇಲೆ ಅಮೋಘವಾಗಿ ಬಿಂಬಿಸಿದ ಈ ಚಿತ್ರ ಭಾರತೀಯ ಸೂಪರ್‍ಹಿಟ್ ಚಿತ್ರಗಳಲ್ಲಿ ಒಂದೆಂದು ದಾಖಲಾಗಿದೆ. ರಾಜಕಪೂರ್ ಅನೇಕ ಹೊಸ ಮುಖಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ನರ್ಗೀಸ್, ಮಂದಾಕಿನಿ, ಡಿಂಪಲ್ ಕಪಾಡಿಯ ಇವರಲ್ಲಿ ಮುಖ್ಯರು. ಸತ್ಯಂ ಶಿವಂ ಸುಂದರಂ (1980). ಪ್ರೇಮ್‍ರೋಗ (1985) ಚಿತ್ರಗಳನ್ನೂ ಇವರ ನಿರ್ದೇಶಿಸಿದ್ದಾರೆ. ರಾಮ್ ತೇರಿ ಗಂಗಾ ಮೈಲಿ ಇವರ ನಿರ್ದೇಶನದ ಕೊನೆಯ ಚಿತ್ರ. ಇದರಲ್ಲಿ ಇವರ ಇನ್ನೊಬ್ಬ ಮಗ ರಾಜೀವ ಕಪೂರ್ ನಾಯಕ ನಟನಾಗಿ ನಟಿಸಿದ್ದಾನೆ. ಹಿಂದೀ ಚಿತ್ರ ರಂಗವನ್ನು ಬೆಳೆಸುವಲ್ಲಿ ರಾಜಕಪೂರರ ಹಾಗೂ ರಾಜಕಪೂರ್ ಕುಟುಂಬದ ಕೊಡುಗೆ ಅಪಾರವಾದುದು.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ